Tuesday, September 7, 2010

ರಾಮಾಯಣ ರಾಮಾರ್ಪಣ..!

ಹರೇರಾಮ





ಆಹಾ ! ಎಂಥಾ ದೃಶ್ಯವದು…!



ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…!

ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..!



ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ…



ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ…



ರೂಪ ತನ್ನದೇ..!



ಸ್ವರ ತನ್ನದೇ..!









ಕೊನೆಗೆ ಗಮನಿಸಿ ಕೇಳಿದರೆ ಕುಮಾರರು ಹಾಡುತ್ತಿರುವ ಕಥೆಯೂ ತನ್ನದೇ..!



ಎಲ್ಲೆಲ್ಲೂ ತಾನೇ ! ತನ್ನ ತನವೇ..!



ರಾಮನು ಪ್ರೀತಿಸದವರಾರು..?



ಪರಮಾತ್ಮ ಚೈತನ್ಯವು ತಲುಪದ ಸ್ಥಳವಾವುದು..?



ಸೂರ್ಯಕಿರಣಗಳು ಸ್ಪರ್ಶಿಸದ ಜೀವವೆಲ್ಲಿ..?



ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವನವನು..!



ಆದರೆ ಅದೇಕೋ…ಕಣ್ಣರಿಯದ, ಕರುಳರಿಯುವ ಕಾರಣವಿರಬೇಕು..! ಆ ಮಕ್ಕಳಲ್ಲಿ ಅಸಾಮಾನ್ಯವಾದ ಪ್ರೀತಿಯುಂಟಾಯಿತು ಪ್ರಭುವಿಗೆ…



ಮೊದಲ ನೋಟದ ಪ್ರೀತಿಯದು..



ಸಾಮಾನ್ಯವಾಗಿ ಬದುಕಿನಲ್ಲಿ ಯಾವುದಾದರೊಂದು ವಸ್ತುವಿನಲ್ಲೋ, ವ್ಯಕ್ತಿಯಲ್ಲೋ ಪ್ರೀತಿಯುಂಟಾಗುವುದು ಪ್ರಯೋಜನವನ್ನು ಕಂಡಾಗ..



ಆದರೆ ಅತ್ಯಂತ ಅಪರೂಪಕ್ಕೊಮ್ಮೆ ಕೆಲವರನ್ನು ಕಂಡೊಡನೆಯೇ ಕಾರಣವಿಲ್ಲದೆಯೇ ಪ್ರೀತಿ ಮೂಡುವುದೂ ಉಂಟು..



ಅದು ನೈಸರ್ಗಿಕವಾದ ಪ್ರೀತಿ…ಅದುವೇ ನಿಜವಾದ ಪ್ರೀತಿ..!



ರಾಮನಿಗೆ ಕುಶಲವರನ್ನು ಕಂಡೊಡನೆಯೇ ಉಂಟಾದ ಪ್ರೀತಿ ಅಕೃತ್ರಿಮವಾದುದು…ಅನಿಮಿತ್ತವಾದುದು..



ಪ್ರೀತಿಯು ಪರ್ಯವಸಾನವಾಗುವುದು ಸಾಮೀಪ್ಯದಲ್ಲಿ…



ಸಾಮೀಪ್ಯವು ಪರ್ಯವಸಾನವಾಗುವುದು ಅದ್ವೈತದಲ್ಲಿ…



ಕುಶಲವರನ್ನು ಕುರಿತು ರಾಮನ ಅಂತರಾಳದಲ್ಲಿ ಅಂಕುರಿಸಿದ ಪ್ರೀತಿ ತನ್ನ ಮೊದಲ ಹೆಜ್ಜೆಯಿಟ್ಟಿತು…



ಅದಾಗಲೇ ಮನದೊಳಗೆ ಪ್ರವೇಶಿಸಿದ್ದ ಮುದ್ದುಮಕ್ಕಳನ್ನು ಮನೆಯೊಳಗೆ ಬರಮಾಡಿಕೊಂಡನವನು…



ರಾಮನೆಂಬ ಬಿಂದುವಿನಲ್ಲಿ ಕುಶಲವರೆಂಬ ವಿಸರ್ಗವು ಸೇರಿದಾಗ ಅಪೂರ್ವ ಪ್ರೇಮತ್ರಿಕೋಣವೊಂದು ಅಯೋಧ್ಯೆಯ ಅರಮನೆಯಲ್ಲಿ ಅನಾವರಣಗೊಂಡಿತು…



ಕಾನನಮಧ್ಯದಲ್ಲಿ ಅರಳಿ, ಹಳ್ಳಿ ಸೇರಿ ಹಾರವಾಗಿ, ಮಹಾನಗರದ ಮಂದಿರಮಧ್ಯದಲ್ಲಿ ಬೆಳಗುವ ಮೂರ್ತಿಯ ಮುಡಿಯೇರಿ ಶೋಭಿಸುವ ಸುಮಗಳಂತೆ…



ಪ್ರಕೃತಿಗರ್ಭದಲ್ಲಿ ಜನಿಸಿ, ರತ್ನಕಾರನಿಂದ ಸಂಸ್ಕಾರ ಪಡೆದು, ಅರಮನೆ ಸೇರಿ, ಮಹಾರಾಜನ ಮುಕುಟವನ್ನಲಂಕರಿಸುವ ಮಾಣಿಕ್ಯಗಳಂತೆ…



ತಮಸಾತೀರದ ಆಶ್ರಮದಲ್ಲ ಜನಿಸಿ, ವಾಲ್ಮೀಕಿಗಳಿಂದ ಸಂಸ್ಕಾರ ಪಡೆದು, ಅಯೋಧ್ಯಾಮಹಾನಗರಿಯ ಅರಮನೆ ಸೇರಿ, ದೇವರ ದೇವನ – ರಾಜಾಧಿರಾಜನ ಸಾನ್ನಿಧ್ಯದಲ್ಲಿ ಶೋಭಿಸಿದರು ಕುಶಲವರು…



ಆವರೆಗೆ ಕುಮಾರರು ಗಿರಿ-ನದೀ-ಕಾನನಗಳನ್ನು ನೋಡಿದ್ದರು..



ಆಶ್ರಮಗಳನ್ನು, ಋಷಿ-ಮುನಿಗಳನ್ನು ನೋಡಿದ್ದರು..



ನಗರ-ನಾಗರಿಕರನ್ನು, ಅರಮನೆ-ಅರಸರನ್ನು ಕಥೆಯಲ್ಲಿ ಕೇಳಿದ್ದರು..ಕಣ್ಣಲ್ಲಿ ನೋಡಿರಲಿಲ್ಲ…!



ಆದರೆ ಅದೇ ಮೊದಲಾಗಿ ನೋಡಿದರೂ ಅಯೋಧ್ಯೆ ಅವರಿಗೆ ಹೊಸದೆನಿಸಲಿಲ್ಲ..!



ಅರಮನೆ ಮನೆಯಲ್ಲವೆನಿಸಲಿಲ್ಲ..!



ಅರಸ ಅಪರಿಚಿತನೆನಿಸಲಿಲ್ಲ..!



ಭೂಮಂಡಲದ ಸರ್ವೋಚ್ಚ ಸಿಂಹಾಸನವೇರಿ ಮೆರೆಯುವ ಮುಗಿಲೆತ್ತರದ ರಾಮನೇಕೋ ಅತಿಹತ್ತಿರದವನಾಗಿ ಕಂಡುಬಂದ..!



ರಾಮನನ್ನು ನೋಡುವಾಗ ಅದೇಕೋ ಅಮ್ಮನ ನೆನಪಾಯಿತು ಆ ಮಕ್ಕಳಿಗೆ…!



ಕೆಲವು ವ್ಯಕ್ತಿತ್ವಗಳು ಅದೆಷ್ಟು ದೂರವಿದ್ದರೂ ಹತ್ತಿರವೇ ಇರುತ್ತವೆ…



ಕಣ್ಮರೆಯಾದರೂ ಮತ್ತೆ ಮತ್ತೆ ಕಣ್ಮುಂದೆ ಬರುತ್ತವೆ…



ವಿಧಿವಿಪರ್ಯಾಸದಲ್ಲಿ ಸೀತೆಯನ್ನು ರಾಮನೇ ಕಾಡಿಗೆ ಕಳಿಸಿಕೊಟ್ಟಿದ್ದೂ ನಿಜ…



ಮಕ್ಕಳು ಆಕೆಯನ್ನು ಬೀಳ್ಕೊಟ್ಟು ಅಯೋಧ್ಯೆಗೆ ಬಂದಿದ್ದೂ ನಿಜ…



ರಾಮನಿಗೆ ಕಣ್ಮುಂದೆ ಶೋಭಿಸುವ ಮಕ್ಕಳಲ್ಲಿ ಕಾಣದ ಮಡದಿ ತೋರಿಬಂದರೆ…



ಆ ಮಕ್ಕಳಿಗೆ ರಾಮನ ಸಾನ್ನಿಧ್ಯ ಅಮ್ಮನ ಮಡಿಲನ್ನು ನೆನಪಿಸಿತು…



ರಾಮನೇ ಗಂಗೆ;



ಯಮಳರೇ ಯಮುನೆ;



ಸೀತೆಯೇ ಗುಪ್ತಗಾಮಿನಿ ಸರಸ್ವತಿ ;



ಅಯೋಧ್ಯೆಯೇ ಪ್ರಯಾಗವಾಯಿತು ಆ ಕ್ಷಣದಲ್ಲಿ…



ವಾಮನರಾಗಿ ಅಯೋಧ್ಯೆಯನ್ನು ಪ್ರವೇಶಿಸಿದ ಕುಶಲವರು ರಾಮನ ಹೃದಯದಲ್ಲಿ ತ್ರಿವಿಕ್ರಮರಾಗಿ ಬೆಳೆದರು…



ಬಲಿ ಚಕ್ರವರ್ತಿ ನೀಡಿದ್ದು ಮೂರು ಹೆಜ್ಜೆಗಳನ್ನು…



ಆದರೆ ವಾಮನನು ಪಡೆದುಕೊಂಡಿದ್ದು ಮೂರು ಲೋಕಗಳನ್ನು…



ಕ್ಷಣಕಾಲ ಕಿವಿಗೊಟ್ಟು ರಾಮಾಯಣದ ಕೆಲಬಿಂದುಗಳನ್ನು ಆಲಿಸಿದ ರಾಮನಿಗೆ ಕುಶಲವರ ಮುಖದಿಂದ ಸಂಪೂರ್ಣ ರಾಮಾಯಣವನ್ನು ಸವಿಯುವ ಮನಸ್ಸಾಯಿತು…



‘ಏಕಃ ಸ್ವಾದು ನ ಭುಂಜೀತ’…



ಏನನ್ನಾದರೂ ಒಬ್ಬನೇ ಸವಿಯುವುದು ರಾಮನ ಸ್ವಭಾವವೇ ಅಲ್ಲ…



ಹಾಗಾಗಿ ಸಹೋದರರು, ಸಚಿವರು, ಮತ್ತಿತರ ಸಹೃದಯರನ್ನು ರಾಮಾಯಣ ಸವಿಯಲು ಸಾರಿ ಕರೆದನು ಶ್ರೀರಾಮ…



ಪೀಠವೇ ಪೀಠಿಕೆಯನ್ನು ಕೊಟ್ಟರೆ…?



ಕಥಾನಾಯಕನೇ ಕಾವ್ಯಕ್ಕೆ ಮುನ್ನುಡಿಯಿತ್ತರೆ…?



ನಡೆದದ್ದು ಹಾಗೆಯೇ…



ಸ್ವಯಂ ಶ್ರೀರಾಮನೇ ರಾಮಾಯಣಗಾನಕ್ಕೆ ಪ್ರಸ್ತಾವನೆ ಗೈದನೆಂದರೆ ಅದು ಅದ್ಭುತವಲ್ಲವೇ…?



ಸ್ವಯಂ ಗಾಂಧರ್ವತತ್ತ್ವಜ್ಞನೇ ಆದ ಆ ನರದೇವನು ತನ್ನ ಮಧುರಗಂಭೀರಸ್ವರದಿಂದ ಸೇರಿದವರ ಮನಗಳನ್ನು ಸೂರೆಗೊಳ್ಳುತ್ತಾ ಆ ಮಹಾಸಭೆಯನ್ನುದ್ದೇಶಿಸಿ ನುಡಿಯಲುಪಕ್ರಮಿಸಿದನು…



“ಈ ದಿವ್ಯ ಸಭೆಯಲ್ಲಿ ಮಂಡಿಸಿರುವ ಸುಕೃತಿಚೇತನರೇ,



ಈ ಬಾಲಕರಲ್ಲಿ ಅಣು ಮಹತ್ತುಗಳ ಅದ್ಭುತ ಸಮಾವೇಶವನ್ನು ನೋಡಿದಿರಾ..!



ಪುಟ್ಟ ಎದೆಗಳಲ್ಲಿ ಬಹುದೊಡ್ಡ ಗ್ರಂಥ..



ಪುಟ್ಟಪುಟ್ಟ ಕೊರಳುಗಳಲ್ಲಿ ಸಂಗೀತ ಸಾಮ್ರಾಜ್ಯದ ಸಾರ ಸರ್ವಸ್ವ ..



ವಯಸ್ಸು ಕಿರಿದು..



ತಪಸ್ಸು ಹಿರಿದು..!



ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..!



ಸ್ಫಟಿಕದ ಪಾತ್ರೆಯಲ್ಲಿ ಬೆಳಗುವ ಜ್ಯೋತಿಯಂತೆ ಮಾನವತನುವಿನಲ್ಲಿ ಮಿನುಗುವ ದೇವಕಾಂತಿ..!



ಈ ಯಮಳ ವಾಮನರು ತಮ್ಮ ಸ್ವರವಿಸ್ತಾರದಿಂದ ತ್ರಿವಿಕ್ರಮರಾಗಿ ಬೆಳೆದು ನಮ್ಮೆಲ್ಲರನ್ನೂ ಆವರಿಸುತ್ತಿದ್ದಾರೆ.



ಈ ಲೋಕವನ್ನೇ ಮರೆಸಿ, ಇನ್ನಾವುದೋ ಲೋಕವನ್ನು ತೆರೆಸುತ್ತಿದ್ದಾರೆ..!



ಎಂದೋ ನಡೆದುಹೋದ ಘಟನೆಗಳು ಈ ಗಾಯನವನ್ನಾಲಿಸುತ್ತಿದ್ದಂತೆಯೇ ಮರುಹುಟ್ಟು ತಾಳುತ್ತಿವೆ..



ಎಂದೆಂದೂ ಕಾಣದ ಆನಂದವೊಂದು ಎಲ್ಲೆಡೆ ಅಂಕುರಿಸುತ್ತಿದೆ..



ಅಲೌಕಿಕವಾದ ಈ ಗಾಯನವು ನನ್ನನ್ನೂ ಕೂಡ ನನ್ನ ಪರಮೋಚ್ಚ ಸತ್ತ್ವದೆತ್ತರಕ್ಕೆ ಎತ್ತುತ್ತಿದೆ..!



ಜೀವಕ್ಷೇಮಂಕರವಾದ ಈ ಧರ್ಮಾಖ್ಯಾನವನ್ನು ಕುಮಾರರು ಮೈಮನವೆಲ್ಲ ಮುಖವಾಗಿ ಆಮೂಲಾಗ್ರವಾಗಿ ಹಾಡಲಿ..



ಮೈಮನವೆಲ್ಲ ಕಿವಿಯಾಗಿ ಕೇಳೋಣ ನಾವೆಲ್ಲರೂ…”



ಸಭೆಯನ್ನುದ್ದೇಶಿಸಿ ಹೀಗೆಂದ ಶ್ರೀರಾಮನು ತನ್ನ ಬೆಳದಿಂಗಳ ದೃಷ್ಟಿಯನ್ನು ಕುಮಾರರೆಡೆಗೆ ಬೀರುತ್ತ ಹಾಡಲು ಪ್ರೇರಿಸಿದನು..



ಅಧರ ಮಧುರ, ವದನ ಮಧುರ, ನಯನ ಮಧುರ, ಹೆಚ್ಚೇಕೆ ಸರ್ವಮಧುರನಾದ ಮಧುರಾಧಿಪತಿಯಿಂದ ಸಂಪ್ರೇರಿತರಾದ ಕುಮಾರರು ಭಾವದುಂಬಿ, ರಸವುಕ್ಕಿ , ಮಧುರ ಮಧುರವಾಗಿ ಹಾಡತೊಡಗಿದರು ಅನಾದಿನಾಯಕನ ಆದಿಕಾವ್ಯವನ್ನು..



ಸಹಜವಾಗಿಯೇ ಮಧುರವಾದ ಕುಶಲವರ ಕಂಠಗಳು ಶ್ರೀರಾಮನ ಸಾನ್ನಿಧ್ಯ ಮತ್ತು ಪ್ರೇರಣೆಗಳಿಂದಾಗಿ ಮತ್ತಷ್ಟು ಮಧುರವಾದವು..!



ಗಂಗೆಯನ್ನು ಬರಮಾಡಿಕೊಳ್ಳುವ ಶಾಂತಸಾಗರದಂತೆ,ಕುಶಲವರು ನಿರಂತರ ಹರಿಸಿದ ಕಥಾಲಹರಿಯನ್ನು ಒಳಗೊಂಡನು ಶ್ರೀರಾಮ..



ಆ ಕಥಾಗಂಗೆಯು ಅವನ ಅಂತರಂಗದ ತುಂಬೆಲ್ಲ ತುಂಬಿ ತುಳುಕಿತು ಆನಂದಬಾಷ್ಪದ ರೂಪ ತಾಳಿ ಕಂಗಳಲ್ಲಿ…



ಆತನ ಹನಿಗೂಡಿದ ನಿಮೀಲಿತ ನೇತ್ರಗಳು ಹಿಮಬಿಂದುಗಳಿಂದೊಪ್ಪುವ ಸಂಧ್ಯಾಕಮಲಗಳಂತೆ ಶೋಭಿಸಿದವು..



ಮಹಾಪ್ರಭುವಿನೊಂದಿಗೆ ಕಳೆದ ರಸನಿಮಿಷಗಳು, ಒಡಗೂಡಿ ಅನುಭವಿಸಿದ ಸಂಕಟ-ಸಂತೋಷಗಳು ‘ಪುನರ್ನವ’ಗೊಂಡವು ಲಕ್ಷ್ಮಣ-ಭರತ-ಶತ್ರುಘ್ನ-ಸುಮಂತ್ರರೇ ಮೊದಲಾದ ರಾಮನ ಒಡನಾಡಿಗಳಲ್ಲಿ..



ಹಾಡುವುದರಲ್ಲಿ ಎರಡು ವಿಧ..



ಇಂದ್ರಿಯ ರಂಜನೆಯಾಗುವಂತೆ ಹಾಡಿದರೆ ಅದು”ದೇಶೀ”



ಆತ್ಮಕ್ಕೆ ಹಿತವಾಗುವಂತೆ – ಮುಕ್ತಿಗೆ ಮಾರ್ಗವಾಗುವಂತೆ ಹಾಡಿದರೆ ಅದು “ಮಾರ್ಗ”



ಕರಣವನ್ನೂ, ಅಂತಃಕರಣವನ್ನೂ ಮಾತ್ರವಲ್ಲ, ಅಂತರಾಳದಲ್ಲಿ ಹುದುಗಿರುವ ಆತ್ಮ – ಪರಮಾತ್ಮರನ್ನೂ ತೃಪ್ತಿಪಡಿಸುವ ಸಂಗೀತ ರೀತಿಯದು..



ಕುಶಲವರು ರಾಮಾಯಣವನ್ನು ಹಾಡಿದ್ದು “ಮಾರ್ಗ” ವಿಧಾನದಲ್ಲಿ..



ಏಕೆಂದರೆ, ರಾಮಾಯಣವು ಕೇವಲ ಬುದ್ಧಿಜೀವಿಗಳ ಕಾವ್ಯವಲ್ಲ.



ಅದು ಹೃದಯ ಜೀವಿಗಳ ಕಾವ್ಯ ; ಆತ್ಮಬಂಧುಗಳ ಕಾವ್ಯ..



ಸಾಗರದಿಂದ ಆವಿಯಾಗಿ ಮೇಲೇಳುವ ನೀರು ಮೋಡವಾಗಿ ತೇಲಿ, ಮಳೆಯಾಗಿ ಸುರಿದು, ಹೊಳೆಯಾಗಿ ಹರಿದು ಪುನಃ ಸಾಗರವನ್ನೇ ಸೇರುವಂತೆ..



ಮುನಿಮನದಲ್ಲಿ ಸನ್ನಿಹಿತನಾದ, ಶ್ರೀರಾಮನಿಂದಲೇ ಉಗಮಿಸಿದ ಶ್ರೀರಾಮಾಯಣವು ಕುಶಲವರ ಮೂಲಕ ಶ್ರೀರಾಮಾರ್ಪಣವಾಯಿತು.



ಕಾಲವೆಂದೂ ನಿಲ್ಲದು..

ಅದೆಂದೆಂದೂ ಹಿಂದೆ ಸರಿಯದು..



ಸದಾ ಮುಂದು ಮುಂದಕ್ಕೆ ಸರಿಯುತ್ತಲೇ ಇರುವುದು ಕಾಲದ ಸ್ವಭಾವ..



ಆದರೆ ಅಂದು ಅಯೋಧ್ಯೆಯಲ್ಲಿ ಕುಶಲವರು ರಾಮಾಯಣವನ್ನು ಹಾಡತೊಡಗಿದಾಗ ಕಾಲಕ್ಕೆ ಮುಂದೆ ಸರಿಯಲು ಸಾಧ್ಯವೇ ಆಗಲಿಲ್ಲ..!



ಅದು ನಿಂತೇ ಬಿಟ್ಟಿತು.. ಮಾತ್ರವಲ್ಲ, ಮೆಲ್ಲಮೆಲ್ಲನೆ ಹಿಂದುಹಿಂದಕ್ಕೆ ಸರಿಯತೊಡಗಿತು..!



ಸಕಲರನ್ನೂ ತಮ್ಮ ಗಾನಪುಷ್ಪಕದಲ್ಲಿ ಕುಳ್ಳಿರಿಸಿಕೊಂಡು ಕುಶಲವರು ಹೊರಟೇಬಿಟ್ಟರು ಕಾಲವಿಹಾರಕ್ಕೆ..!



ಈ ಕಾಲದಿಂದ ಆ ಕಾಲಕ್ಕೆ..



ರಾಮಸಮ್ಮುಖದ ಕಾಲದಿಂದ ರಾಮಪ್ರತೀಕ್ಷೆಯ ಕಾಲಕ್ಕೆ..!



ಅಯೋಧ್ಯೆ ನಿಶ್ಶಬ್ದವಾಯಿತು..



ಜಡವಸ್ತುಗಳು ಮಾತ್ರವೇ ಉಳಿದವಲ್ಲಿ..!



ಸಕಲ ಚೇತನರೂ ರಾಮನ ಬದುಕಿನ ಜೊತೆಗೇ ಪಯಣಿಸುವ ಕುಶಲವರನ್ನು ಹಿಂಬಾಲಿಸಿದರು..



ಮುಚ್ಚಿದ ಕಣ್ಣುಗಳ ಮುಂದೆ ಮೂಡತೊಡಗಿತ್ತು ರಾಮಾಯಣ..





ಹರೇರಾಮ

ರಾಮಸಾಗರಗಾಮಿನೀ…

ಹರೇರಾಮ





ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…?

ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…?

ರಾಮರಸ ಒಳಸೇರಿದಾಗ ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು…



ಬಿಂದುವಿನೊಳು ಸಿಂಧು ಹಿಡಿಸುವುದೇ…?

ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..?

ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…!









ಕೈಯಲ್ಲಿ ತಂಬೂರಿ…

ಕಣ್ತುಂಬ ರಾಮ…

ಬಾಯಲ್ಲಿ ರಸಕಾವ್ಯ…



ಗಂಗೋತ್ರಿಯಿಂದ ಹೊರಟು ಗಂಗಾಸಾಗರವನ್ನು ಸೇರುವ ಮುನ್ನ ದೇಶದೆಲ್ಲೆಡೆ ಹರಿಯವ ಗಂಗೆಯಂತೆ…

ಆಶ್ರಮದಿಂದ ಹೊರಹೊರಟು ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಹಾಡತೊಡಗಿದರವರು ರಾಮಕಥೆಯನ್ನು…



” ಐಸೀ ಲಾಗೀ ಲಗನ್…

ಮೀರಾ ಹೋಗಯೀ ಮಗನ್…

ವೋ ತೋ ಗಲೀ ಗಲೀ ಹರಿಗುನ್ ಗಾನೇ ಲಗೀ…”

ಕೃಷ್ಣರಸವೂಡಿದಾಗ ಅರಮನೆಯನ್ನು ಪರಿತ್ಯಜಿಸಿ, ಗಲ್ಲಿಗಲ್ಲಿಗಳಲ್ಲಿ ಹರಿಗುಣವನ್ನು ಹಾಡಿ ಹಾಡಿ ಕುಣಿದ, ಕುಣಿದು ಕುಣಿದು ಹಾಡಿದ ಮೀರಾ ನೆನಪಾಗುವಳಲ್ಲವೇ ಇಲ್ಲಿ…!?



ತನ್ನಲ್ಲಿ ತನ್ಮಯರಾದ ರಾಮತನಯರನ್ನು ಕಂಡು ರಾಮಾಯಣಮಾತೆಯೂ ಕರಗಿದಳೇನೋ…?

ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರನ್ನು ಅವಳು ತನ್ನ ಮಡಿಲೊಳಗೆ ಹಾಕಿಕೊಂಡಳು…

ಮಾತ್ರವಲ್ಲ, ಮನೆಗೆ ಕರೆದೊಯ್ದಳು…!



ಅಯೋಧ್ಯೆಯಲ್ಲದೆ ಮತ್ತಾವುದು ಅವಳ ಮನೆ…?

ತಮಸಾತೀರದಲ್ಲಿ ಹುಟ್ಟಿ, ಸರಯೂತೀರದಲ್ಲಿ ನೆಲೆಸಿ, ವಿಶ್ವದಲ್ಲೆಲ್ಲ ಪಸರಿಸಿದವಳಲ್ಲವೇ ಅವಳು…?



ಅದು ತಮ್ಮೂರು, ತಮ್ಮ ಮನೆ ಎಂಬ ಅರಿವಿಲ್ಲದೆಯೇ ಅಯೋಧ್ಯೆಯನ್ನು ಪ್ರವೇಶಿಸಿದರು ಕುಶಲವರು…

ಮನೆಗೈತರುವ ತನ್ನೊಡೆಯನ ಕುಡಿಗಳನ್ನು ಕಂಡು ಅವ್ಯಕ್ತವಾಗಿ ಮಿಡಿದಳು ಅಯೋಧ್ಯೆ…!

‘ಈರ್ವರು ರಾಮರು ಬಂದರೇ’ ಎಂಬ ಬೆರಗಿನಲ್ಲಿ ಹರಿಯುವುದನ್ನೇ ಮರೆತಳು ಸರಯೂ…!



ಬಾಲರಾಮನು ನಲಿದಾಡಿದ ಅಯೋಧ್ಯೆಯ ಬೀದಿಗಳಲ್ಲಿ – ರಾಜಬೀದಿಗಳಲ್ಲಿ ನಲಿನಲಿದು ಹಾಡಿದರು ರಾಮಬಾಲರು…

ಮಿಂಚಿನಮರಿಗಳು ಸಂಚರಿಸಿದಂತಾಯಿತು ನಗರಿಯಲ್ಲಿ…



ಕುಮಾರರ ಗಾನಧ್ವನಿಯು ಪಸರಿಸುತ್ತಿದ್ದಂತೆಯೇ…

ಮಲಗಿದವರೆದ್ದುಕುಳಿತರು…

ಕುಳಿತವರು ನಿಂತರು…

ನಿಂತವರು ನಾದದೆಡೆಗೆ ನಡೆದರು…

ಕೇಳುಗರ ಜೊತೆಗೂಡಿದರು…



ಅಯೋಜಿತವಾಗಿ ಕುಶಲವರ ರಾಮಾಯಣಗಾನವು ನಡೆಯತೊಡಗಿದಾಗ…

ಬೀದಿಯಲ್ಲಿ ನಡೆದುಹೋಗುವವರು ನಿಂತರು…

ನಿಂತವರು ಕುಳಿತರು…

ಕುಳಿತವರು ಕಣ್ಮುಚ್ಚಿದರು…

ಈ ಲೋಕವನ್ನೇ ಮರೆತರು…

ಕುಮಾರರ ಗಾನತರಂಗವು ಅಯೋಧ್ಯೆಯಲ್ಲಿ ಯಾರು-ಯಾರನ್ನು ತಲುಪಿತೋ ಅವರು ತಮಗರಿವಿಲ್ಲದಂತೆಯೇ ಆ ಕಡೆಗೆ ಸೆಳೆಯಲ್ಪಟ್ಟರು…



ಗ್ರಾಹಕನು ಬಯಸಿದ ವಸ್ತುವನ್ನು ಕೊಡುವಷ್ಟರಲ್ಲಿ ರಾಮಾಯಣವನ್ನು ಕೇಳಿಸಿಕೊಂಡ ವರ್ತಕನಿಗೆ ಮೌಲ್ಯವನ್ನು ತೆಗೆದುಕೊಳ್ಳುವುದೇ ಮರೆತುಹೋಯಿತು…

ಒಲೆಯ ಮೇಲಿಟ್ಟ ಹಾಲಿನಪಾತ್ರೆಯನ್ನು ಇಳಿಸುವುದನ್ನೇ ಮರೆತು ಗೃಹಿಣಿಯರು ಬೀದಿಗೆ ಧಾವಿಸಿದರು…

ಅಮ್ಮನ ಕೆಚ್ಚಲಲ್ಲಿ ಬಾಯಿಟ್ಟು ಹಸಿವಾರಿಸಿಕೊಳ್ಳುತ್ತಿದ್ದ ಎಳೆಗರುಗಳು ಮುಖ ತಿರುಗಿಸಿ, ಕಿವಿ ನಿಮಿರಿಸಿ ರಾಮಾಯಣ ಕೇಳತೊಡಗಿದವು…

ಕ್ಷಣವೊಂದರಲ್ಲಿ ಹತ್ತೂ ದಿಶೆಗಳನ್ನವಲೋಕಿಸುವ ಸಹಸ್ರದೃಷ್ಟಿಗಳಾದ ಪ್ರಹರಿಗಳ ಕಣ್ಣುಗಳು ಕುಮಾರರಲ್ಲಿ ಕೀಲಿಸಿಹೋದವು…

ವಜ್ರಕಠಿಣವಾದ ಅವರ ಮುಖದಲ್ಲಿ ಒಸರಿತು ಕಣ್ಣೀರು…



ಸಂಖ್ಯೆಯಿಲ್ಲದ ಸಂಖ್ಯೆಯಲ್ಲಿ ಸೇರಿದ ಜನಸಮೂಹವು ಕುಶಲವರು ಸಂಚರಿಸಿದಂತೆ ಜೊತೆಗೂಡಿ ಹಿಂಬಾಲಿಸತೊಡಗಿತು…

ಅಯೋಧ್ಯೆಯಲ್ಲಿ ಉಳಿದದ್ದು ಎರಡೇ ಸದ್ದು…

ಕುಶಲವರ ಗಾನವೊಂದಾದರೆ ಜನಸಮೂಹದ ಉದ್ಗಾರವಿನ್ನೊಂದು…



ಶರೀರದ ಎಲ್ಲಿಯೋ ಒಂದೆಡೆ ಉಂಟಾಗುವ ಸುಖಸ್ಪರ್ಶ ಕ್ಷಣಮಾತ್ರದಲ್ಲಿ ಹೃದಯವನ್ನು ತಲುಪಿ ಅಲ್ಲಿ ಮಧುರಭಾವಕಂಪನಗಳನ್ನೇರ್ಪಡಿಸುವಂತೆ…

ಅಯೋಧ್ಯೆಯ ಬೀದಿಗಳಲ್ಲುಂಟಾದ ಕುಶಲವರ ಪಾದಸ್ಪರ್ಶವು ಅರಮನೆಯ ಅಂತರಾತ್ಮದಲ್ಲಿ ಅವ್ಯಕ್ತ ವಾತ್ಸಲ್ಯಕಂಪನಗಳನ್ನೇರ್ಪಡಿಸಿತು…

ತನ್ನ ನಿತ್ಯಸಹಚರಿಯಾದ ಮೂಲಪ್ರಕೃತಿಯ ಚಿರಕಾಲವಿರಹದಿಂದ ಸಂತಪ್ತನಾದ ಪರಮಪುರುಷನಿಗೆ ಆಕೆಯ ಹೃದಯದುಸಿರೇ ತಂಗಾಳಿಯಾಗಿ ಅರಮನೆಯ ಸುತ್ತ ಸುಳಿದಾಡಿದಂತೆನಿಸತೊಡಗಿತು…

ಭೂಸುತೆಯನ್ನು ಬಹುಕಾಲದಿಂದ ಕಾಣದೆ ಕುಂದಿದ ಕಂಗಳು, ಆಕೆಯ ಸವಿನುಡಿಗಳನ್ನು ಕೇಳಲು ಅದೆಷ್ಟೋ ಕಾಲದಿಂದ ಕಾತರಿಸಿದ ಕಿವಿಗಳು ಅದೇನೋ ಸುಳಿವು ಸಿಕ್ಕಂತೆನಿಸಿ ತನುವಿನಲ್ಲಿ ರೋಮಾಂಚನ ತಂದವು…

ಯಾರ ಅಪ್ಪಣೆಯನ್ನೂ ಎದುರು ನೋಡದೆ ನೇರವಾಗಿ ಒಳಬರುವ ಮನೆಯ ಮಕ್ಕಳಂತೆ ಎಳೆಯ ಕೊರಳುಗಳಿಂದ ಹೊರಹೊಮ್ಮಿದ ಮಧುರಮಂಗಲನಿನಾದವು ಅರಮನೆಯ ಒಳಪ್ರವೇಶಿಸಿ ದೊರಯ ಕಿವಿದೆರೆಗಳನ್ನು ಮೀಟಿತು…

ಕಿರಿಬೆರಳ ಹಿಡಿದೆಳೆಯುವ ಎಳೆಯ ಕರಗಳಂತೆ ಬಳಿಕರೆಯತೊಡಗಿತು ಇಲ್ಲವೆನ್ನಲಾರದಂತೆ…

ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು ಅಚಿಂತಿತವಾಗಿ – ಅಪ್ರಯತ್ನವಾಗಿ ಉಪ್ಪರಿಗೆಯ ಮೆಟ್ಟಿಲುಗಳನ್ನೇರಿದವು…



ಗಗನಾಂಗಣದ ಮಧ್ಯೆ ನಿಂತು ಧರಣಿಯೆಡೆಗೆ ದೃಷ್ಟಿ ಬೀರುವ ಪೂರ್ಣಚಂದ್ರನಿಗೆ ಸಾಗರಮಧ್ಯದಲ್ಲಿ ತನ್ನದೇ ಪ್ರತಿಬಿಂಬವು ಗೋಚರಿಸುವಂತೆ…

ಉಪ್ಪರಿಗೆಯಲ್ಲಿ ನಿಂತು ರಾಜಮಾರ್ಗದೆಡೆಗೆ ದೃಷ್ಟಿ ಹಾಯಿಸಿದ ರಾಮಚಂದ್ರನಿಗೆ ಗೋಚರಿಸಿದವು ಜನಸಾಗರದ ನಡುವೆ ಶೋಭಿಸುವ ತನ್ನದೇ ಅವಳಿ ಪ್ರತಿಬಿಂಬಗಳು…!



ಭುವಿಯನ್ನು ಬೆಳಗುವ ತನ್ನ ಎಳೆಯ ಕಿರಣಗಳ ಶೋಭೆಯನ್ನು ವೀಕ್ಷಿಸಲು ಸೂರ್ಯದೇವನು ಇಳಿದು ಬಂದಂತಿದ್ದ, ತನ್ನ ತರಂಗಗಳ ವಿಲಾಸವನ್ನು ವೀಕ್ಷಿಸಲು ಸಾಗರವೇ ಮೇಲೆದ್ದುಬಂದಂತಿದ್ದ ಅಪೂರ್ವ ಸನ್ನಿವೇಶವದು…



ಅಚ್ಚರಿ-ಮೆಚ್ಚುಗೆ ತುಂಬಿದ ಹೃದಯದಿಂದ; ಎವೆಯಿಕ್ಕದ ಕಂಗಳಿಂದ ಮೈಮರೆತು ಮಕ್ಕಳನ್ನು ನೋಡಿಯೇನೋಡಿದನು ಪುರುಷೋತ್ತಮ…





ಹರೇರಾಮ

ರಾಮನಿಂದ ರಾಜ್ಯದವರೆಗೆ…

ಹರೇರಾಮ





ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ…



ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ…



ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ…



ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ…









ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ…



ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ…?



ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು…!



ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?



ಒಬ್ಬ ಜಯಿಸುವವರಲ್ಲಿ ಶ್ರೇಷ್ಠ…



ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!



ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..



ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!



ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ…



ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!



ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ…



ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ…!



ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ…



ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ…!



ಒಬ್ಬನದು ಅರಮನೆ…



ಇನ್ನೊಬ್ಬನಿಗೆ ಅರಣ್ಯವೇ ಮನೆ!



ಒಬ್ಬನದು ಜೈತಯಾತ್ರೆಯಾದರೆ ಮೈತ್ರಯಾತ್ರೆ ಇನ್ನೊಬ್ಬನದು..!



ಒಬ್ಬನ ಶೋಭೆಗೆ ಕಾರಣ ಆಭೂಷಣವಾದರೆ ಇನ್ನೊಬ್ಬನಿಗೆ ಆತ್ಮವೇ ಆಭರಣ..!



ವಿಶ್ವದ ಯಾವುದೇ ಎರಡು ಮಹಾಶಕ್ತಿಗಳ ನಡುವೆ ಸಂಗಮವಾಗಲೀ, ಸಂಘರ್ಷವಾಗಲೀ ಏರ್ಪಟ್ಟಾಗ ಅದಕ್ಕೊಂದು ಮಹಾಫಲವೇ ಇರಬೇಕಲ್ಲವೇ?



ವಿಧಿಚಿತ್ತವೇನಿತ್ತೋ?



ಬ್ರ್ರಹ್ಮ-ಕ್ಷತ್ರಗಳ ಮಹಾಮೇರುಗಳೆರಡು ವಸಿಷ್ಠ-ಕೌಶಿಕರ ರೂಪದಲ್ಲಿ ಸಂಧಿಸಿದವು ಅಲ್ಲಿ…



ಎತ್ತರದವರೆಲ್ಲ ಹತ್ತಿರದವರಲ್ಲ…



ಹತ್ತಿರದವರೆಲ್ಲ ಎತ್ತರದವರಾಗಿರಬೇಕಿಲ್ಲ…



ಎತ್ತರವಾಗಿದ್ದೂ ಹತ್ತಿರವಾಗುವವರು ಎಲ್ಲೋ ಭುವಿಗೊಬ್ಬರು…ಯುಗಕ್ಕೊಬ್ಬರು..!



ಎತ್ತರವನ್ನು ಕಂಡಾಗ ಕೌಶಿಕನಿಗೆ ವಸಿಷ್ಠರು ಸಾಕ್ಷಾತ್ ಪರಮಾತ್ಮನೇ ಎಂಬಂತೆ ತೋರಿಬಂದರು..



ಆದರೆ ಹತ್ತಿರವಾದಾಗ ಅವರು ತನ್ನಾತ್ಮವೇ ಎನ್ನಿಸುವಷ್ಟು ಆಪ್ತವಾದರು..!



ವಸಿಷ್ಠರ ಎತ್ತರ ಕೌಶಿಕನಲ್ಲಿ ವಿನಯವನ್ನು ಹುಟ್ಟುಹಾಕಿತು..



ಅವರ ಆಪ್ತತೆ ಕೌಶಿಕನಲ್ಲಿ ಪ್ರೀತಿಯನ್ನು ಮೂಡಿಸಿತು..



ಪ್ರೀತಿಯು ಆತನನ್ನು ಸಮೀಪಿಸುವಂತೆ ಮಾಡಿತು..



ವಿನಯವು ಆತನನ್ನು ಅವರ ಶ್ರೀಚರಣಗಳಲ್ಲಿ ಮಣಿಸಿತು..



ಆಚಾರ್ಯನೆಂದರೆ ಆತ್ಮಸಾಮ್ಯಾವಹನಲ್ಲವೇ?



ಬಳಿಸಾರುವ ಜೀವಗಳನ್ನು ಆತ ತನ್ನಂತೆಯೇ ಮಾಡುವುದು ನಿಶ್ಚಯವಲ್ಲವೇ?



ಪ್ರಣತಿಗೆ ಪ್ರತಿಕ್ರಿಯೆಯಾಗಿ ವಸಿಷ್ಠರಿತ್ತ ಆಶೀರ್ವಾದದ ಆಂತರ್ಯದಲ್ಲಿ ಸಮ್ರಾಟ್ ಕೌಶಿಕನು ತನ್ನಂತೆ ‘ಸ್ವರಾಟ್’ ಆಗಲೆಂಬ ಆಶಯವಿದ್ದಿತು..



ರತ್ನಸಿಂಹಾಸನ ವಿರಾಜಿತನಾದ, ಮೃಷ್ಟಾನ್ನಭೋಜಿಯಾದ ಕೌಶಿಕನಿಗೆ ವಸಿಷ್ಠರಿತ್ತ ದರ್ಭಾಸನ, ಕಂದ-ಮೂಲ-ಫಲಗಳು, ಬದಲಾಗುವ ಭವಿಷ್ಯತ್ತಿನ ಅವ್ಯಕ್ತ ಸಂದೇಶವನ್ನು ನೀಡುವಂತಿದ್ದಿತು..



ಮತ್ತೆ ನಡೆಯಿತು ಮಹಾಮುನಿ ಮತ್ತು ಮಹಾರಾಜರ ನಡುವೆ ಕುಶಲಪ್ರಶ್ನೆಗಳ ವಿನಿಮಯ..



ಮಹೋನ್ನತ ವ್ಯಕ್ತಿತ್ವಗಳ ನಡುವೆ ನಡೆಯುವ ಕುಶಲಪ್ರಶ್ನೆಗಳು ಲೋಕಸಾಮಾನ್ಯರ ಬದುಕಿಗೆ ಆತ್ಮವಿಸ್ತರಣೆಯ ಕೈದೀವಿಗೆಗಳು..!



ಕೌಶಿಕನು ಪ್ರಶ್ನಿಸಿದ್ದು ತಪಸ್ಸು-ಅಗ್ನಿಹೋತ್ರಗಳ, ಶಿಷ್ಯ-ಶ್ರದ್ಧಾಳುಗಳ, ಗಿಡಮರಗಳ, ಮೃಗಪಕ್ಷಿಗಳ ಯೋಗಕ್ಷೇಮವನ್ನು..



ಮಹರ್ಷಿಯೊಬ್ಬರ ಆತ್ಮ ಅವರ ಶರೀರಕ್ಕಷ್ಟೇ ಸೀಮಿತವಾಗಿರಬಾರದು…



ಅದು ಶಿಷ್ಯರಲ್ಲಿ, ಮೃಗಪಕ್ಷಿಗಳಲ್ಲಿ, ಹೆಚ್ಚೇಕೆ ಗಿಡಮರಗಳಲ್ಲಿಯೂ ವಿಸ್ತರಿಸಿ ವ್ಯಾಪಿಸಿರಬೇಕು…



ಇವುಗಳಲ್ಲಿ ಎಲ್ಲಿ ನೋವಾದರೂ ತಾನು ನೋಯುವ, ಎಲ್ಲಿ ನಗುವಿದ್ದರೂ ತಾನು ನಲಿಯುವ ತಾದಾತ್ಮ್ಯ ಆತನಿಗಿರಬೇಕು …



ತನ್ನೊಡನಾಡಿಗಳಲ್ಲೆಲ್ಲ ತನ್ನನ್ನೇ ಕಾಣುವ ವಿಸ್ತೃತಾತ್ಮನಾಗಿರಬೇಕು ಆತ…



ಸರ್ವತ್ರ ಕುಶಲವೆಂದ ವಸಿಷ್ಠರು ಅಂತೆಯೇ ಕೌಶಿಕನ, ರಾಜ್ಯ-ಕೋಶಗಳ, ಸೈನ್ಯ-ಸಾಮಂತರ, ಪುತ್ರ-ಪೌತ್ರರ, ಮಂತ್ರಿ-ಮಿತ್ರರ, ಪರಿಜನ-ಪುರಜನರ ಕುಶಲ ವಿಚಾರಿಸಿದರು…



‘ದೇಶವು ದೇಹವಾದರೆ, ರಾಜನೇ ಅದರ ಆತ್ಮ.. ಸೈನ್ಯ-ಕೋಶಗಳು, ಮಂತ್ರಿಗಳು, ಪ್ರಜೆಗಳೇ ಅದರ ಅಂಗಾಂಗಗಳು-ಇಂದ್ರಿಯಗಳು’ ಎಂಬ ತತ್ತ್ವದ ಅಭಿವ್ಯಕ್ತಿ ವಸಿಷ್ಠರ ಕುಶಲ ಪ್ರಶ್ನೆಯಲ್ಲಿತ್ತು…!



ಮಹಾಪುರುಷರು ಕುಶಲವನ್ನು ಪ್ರಶ್ನಿಸುವ ಪರಿಯೇ ಬದುಕಿಗೆ ಇಷ್ಟು ದೊಡ್ಡ ಸಂದೇಶವನ್ನು ನೀಡುವುದಾದರೆ, ಅವರ ಬದುಕು ಇನ್ನೆಷ್ಟು ದೊಡ್ಡ ಸಂದೇಶವನ್ನು ಜೀವಿಗಳ ಜೀವನಕ್ಕೆ ನೀಡೀತು?



ವಸಿಷ್ಠ-ಕೌಶಿಕರ ಕುಶಲಸಂಭಾಷಣೆಯು ಜೀವಲೋಕದ ಕುಶಲಕ್ಕೇ ಕಾರಣವಾಗಬಹುದಾದ ಮಹತ್ತರಘಟನಾವಳಿಗಳನ್ನು ಅನಾವರಣಗೊಳಿಸಬಹುದೆಂಬುದನ್ನು ಯಾರು ತಾನೇ ಊಹಿಸಿದ್ದರು…!?





ಹರೇರಾಮ

ವಿಶ್ವವ್ಯವಸ್ಥೆಯ ಜೀವಸೂತ್ರವಿದು...

ವಿಶ್ವವ್ಯವಸ್ಥೆಯ ಜೀವಸೂತ್ರವಿದು ವಿಶ್ವನಿಯಾಮಕಪೀಠ..!






ಹರೇರಾಮ





ಅದ್ಭುತಾಕಾರದ ಅಗ್ನಿಗೋಳಗಳು..!



ಅನಂತ ಅಂತರಾಳಗಳು..!



ಬೆಳಕ ಬೀರುವ ತಾರೆಗಳು..!



ಬೆಳಕ ಹೀರುವ ಗ್ರಹಗಳು..!



ಒಂದನ್ನೊಂದು ಬಿಡದಂತೆ ಹಿಡಿದಿಡುವ ಆಶ್ಚರ್ಯಕರ ಸೆಳೆತ..!



ಕ್ಷಣಮಾತ್ರವೂ ನಿಲ್ಲದ ಅವಿಶ್ರಾಂತ ಗತಿ..!



ಒಂದರ ಸುತ್ತ ಇನ್ನೊಂದು ಸುತ್ತುವ ಅನಿರ್ವಚನೀಯ ಪ್ರೀತಿ..!









ಮಾನವ ಮತಿಯ ಸಕಲ ಕಲ್ಪನೆಗಳಿಗೂ ಮೀರಿದ ವಿಸ್ತಾರದ ಅನಂತಕೋಟಿ ಬ್ರಹ್ಮಾಂಡ ಮಂಡಲಗಳ ಮಧ್ಯದಲ್ಲೊಂದು ಪುಟ್ಟ ಭೂಮಂಡಲ..!



ಮೂರ್ತಿ ಕಿರಿದಾದರೂ ಕೀರ್ತಿ ಕಿರಿದಲ್ಲವದರದ್ದು..!



ಬಗೆದು ನೋಡಿದರೆ ಬ್ರಹ್ಮಾಂಡದಲ್ಲೆಲ್ಲ್ಲೂ ಜೀವಗಳ ಸುಳಿವಿಲ್ಲ ..!



ಜೀವಸೆಲೆಯಿರುವುದು ನಮ್ಮ ಹೆಮ್ಮೆಯ ಭೂಮಿಯಲ್ಲಿ ಮಾತ್ರವೇ..!



ಅನಂತ ತೇಜಃಪುಂಜಗಳಿರಬಹುದು ಬ್ರಹ್ಮಾಂಡದಲ್ಲಿ..



ಆದರೆ ಅಸಂಖ್ಯ ಚೇತನಗಳು ಬಗೆಬಗೆಯ ರೂಪದ, ಬಗೆಬಗೆಯ ರೀತಿಯ ಬದುಕು ನಡೆಸುವುದು ಭೂಮಿಯಲ್ಲಿ ಮಾತ್ರ..!



ಆದುದರಿಂದಲೇ ಭೂಮಿಯೆಂದರೆ ಅದು ಬ್ರಹ್ಮಾಂಡದ ಜೀವ…!



ಜೀವಗಳೇನು ! ದೇವರೇ ಮತ್ತೆ ಮತ್ತೆ ಹುಟ್ಟಿ ಬರುವ ಪಾವನ ರಾಷ್ಟ್ರವೊಂದಿದೆ ಭೂಮಂಡಲದಲ್ಲಿ…



ಅದು ‘ಭಾರತ‘



ಭಾರತವೆಂದರೆ ನಾಕಕಿಂತ ಮೇಲು..



ಭಾರತೀಯರೆಂದರೆ ದೇವತೆಗಳಿಗಿಂತಲೂ ಮಿಗಿಲು..



ಗಾಯಂತಿ ದೇವಾಃ ಕಿಲ ಗೀತಕಾನಿ



ಧನ್ಯಾಸ್ತು ತೇ ಭಾರತಭೂಮಿಭಾಗೇ




ಸ್ವರ್ಗಾಪವರ್ಗಾಸ್ಪದಮಾರ್ಗಭೂತೇ



ಭವಂತಿ ಭೂಯಃ ಪುರುಷಾಃ ಸುರತ್ವಾತ್





-ವಿಷ್ಣುಪುರಾಣ





ಸ್ವರ್ಗದಲ್ಲಿ ಮುಕ್ತಿಗೆಡೆಯಿಲ್ಲ..



ಆದುದರಿಂದಲೇ ದೇವತೆಗಳು ತಮ್ಮ ದೇವತ್ವವನ್ನೂ, ಸ್ವರ್ಗವಾಸವನ್ನೂ ತೊರೆದು ಮಾನವರಾಗಿ ಹುಟ್ಟಿ ಬರಬಯಸುವ ಮೋಕ್ಷಭೂಮಿಯಿದು..!



ಭಾರತವೆಂದರೆ ಮಾನವತೆಯಲ್ಲಿ ಹುಟ್ಟಿ, ದಾನವತೆಯನ್ನು ಮೆಟ್ಟಿ, ಮಾಧವತೆಯನ್ನುಮುಟ್ಟುವ ಮಹಾಸಾಧಕರ ತವರೂರು..



ದೇವದೂತರು ಹುಟ್ಟಿಬರುವ ದೇಶಗಳು ಹಲವಿವೆ..



ಆದರೆ, ಸ್ವಯಂ ದೇವರೇ ಭುವಿಯಲ್ಲಿ ವಾಸಿಸುವ ತನ್ನ ಮಕ್ಕಳನ್ನು ನೋಡಲು ಅಗಾಗ ಮೈವೆತ್ತು ಬರುವ ನಾಡೆಂದರೆ ಭಾರತವೊಂದೇ..!



ಭಾರತವೆಂದರೆ ದೇವರ ಒಡಲು…!



ಭಾರತವೆಂದರೆ ದೇವರ ಮಡಿಲು..!



ಭಾರತವೆಂದರೆ ದೇವರ ತಾಯಿ..!!



ಭೂಮಿಯೆಂಬ ಮನೆಯಲ್ಲಿ ಭಾರತವೆಂದರೆ ದೇವರಕೋಣೆ..!



ಮೂರು ಮಹಾಸಮುದ್ರಗಳು…



ಏಳು ಕುಲಪರ್ವತಗಳು…



ನೂರಾರು ಮಹಾನದಿಗಳು…



ಸಾವಿರಾರು ಭಾಷೆಗಳು…



ಅಗಣಿತ ಪಂಥಗಳು – ಜೀವನ ವಿಧಾನಗಳು..



ಬಗೆಬಗೆಯ ಮಾನವ ಪ್ರಭೇದಗಳು…



ತನ್ನ ತಾಯ್ನಾಡಿಗೆ ದೇವರು ಏನನ್ನು ತಾನೆ ಕೊಡಲಿಲ್ಲ..!?



ಈ ನೆಲಕ್ಕೆ ನೀಡಿದ ತೆರನಾದ ಬಗೆಬಗೆಯ ಸಂಪತ್ತುಗಳನ್ನು ಬೇರಾವ ರಾಷ್ಟ್ರಕ್ಕೆ ತಾನೇ ಈಶ್ವರನಿತ್ತಿದ್ದಾನೆ…?



ಸುಂದರ ಶರೀರಕ್ಕೊಂದು ತುಂಬಿದ ಹೃದಯ ಬೇಡವೇ..?



ವಿಶ್ವದಲ್ಲಿಯೇ ಸರ್ವೋಪರಿಯೆನಿಸಿದ ಭಾರತದ ಹೃದಯಸ್ಥಾನದಲ್ಲಿದ್ದ ನಾಡು…



ಅದುವೇ ಕೋಸಲ…!



ಕೋಸಲವೆಂದರೆ…



ಜ್ಞಾನದ ಬೆಳಕಿನಿಂದ ಬೆಳಗುವ ಆತ್ಮಜ್ಞಾನಿಗಳ ‘ಜ್ಞಾನ‘ರಾಜ್ಯವದು..



ಎಲ್ಲರ ಮೊಗದಲ್ಲಿ ನಗು ಮಿನುಗುವ ‘ಆನಂದ‘ರಾಜ್ಯವದು..



ಯಾರಿಗೂ ಯಾವಾಗಲೂ ಯಾರಿಂದಲೂ ಭಯವಿಲ್ಲದ ‘ಅಭಯ‘ರಾಜ್ಯವದು..



ಧುಮ್ಮಿಕ್ಕುವ ಝರಿಗಳ, ಹರಿಯುವ ಹೊಳೆಗಳ, ಚಿಮ್ಮುವ ಚಿಲುಮೆಗಳ, ಸ್ತಿಮಿತಗಾಂಭೀರ್ಯದ ಸರೋವರಗಳ ಕಣ್ತಣಿಸುವ ‘ಅಮೃತ‘ರಾಜ್ಯವದು..



ದೇವರ ಸೃಷ್ಟಿಯ ವನಗಳು, ಮಾನವ ಸೃಷ್ಟಿಯ ಉದ್ಯಾನಗಳಿಂದ ವಿಭೂಷಿತವಾದ ‘ಹಸಿರು‘ರಾಜ್ಯವದು..



ಪ್ರಕೃತಿಯ ಹಸಿರುಂಡು ಮಮತೆಯ ಹಾಲುಣಿಸುವ ಹಸುಗಳ ಹುಂಭಾರವವು ಹೆಜ್ಜೆ ಹೆಜ್ಜೆಗೆ ಕೇಳಿಬರುವ ‘ವಾತ್ಸಲ್ಯ‘ರಾಜ್ಯವದು..



ಎಲ್ಲೆಂದರಲ್ಲಿ ಮಂತ್ರಗಳು ಮೊಳಗುವ ‘ವೇದ‘ರಾಜ್ಯವದು…



ಎಲ್ಲೆಂದರಲ್ಲಿ ದರ್ಶನವೀಯುವ ದೇವವೃಕ್ಷಗಳ, ದೇವಸ್ಥಾನಗಳ ‘ದೇವ‘ರಾಜ್ಯವದು…



ಉಸಿರು ಉಸಿರಿನಲ್ಲಿ ಹೋಮಧೂಮದ ಸುಗಂಧವು ಪಸರಿಸುವ ‘ಯಜ್ಞ‘ರಾಜ್ಯವದು..



ಧನಲಕ್ಷ್ಮಿಯು ಕೋಶದಲ್ಲಿಯೂ, ಧಾನ್ಯಲಕ್ಷ್ಮಿಯು ಕಣಜದಲ್ಲಿಯೂ ತುಂಬಿತುಳುಕುವ ‘ಸಮೃದ್ಧಿ‘ರಾಜ್ಯವದು..



ತುಂಬಿದ ಸಂಪತ್ತು ನಿಂತ ನೀರಾಗದೆ ದೀನರೆಡೆಗೆ ಧಾರಾಳವಾಗಿ ಹರಿಯುವ ‘ದಾನ‘ರಾಜ್ಯವದು..



ತುಷ್ಟ ಮನಸ್ಸು, ಪುಷ್ಟ ಶರೀರಗಳಿಂದ ಕೂಡಿದ ಪ್ರಜೆಗಳ ‘ತೃಪ್ತಿ‘ರಾಜ್ಯವದು..



ವೇದಘೋಷ, ದೇವಪೂಜೆ, ದಾನ, ಯಜ್ಞ, ತಪಸ್ಸುಗಳ ಮೂಲಕವಾಗಿ ಅಲ್ಲಿ ದಿವ್ಯತೆಯು ಪ್ರಕಟಗೊಳ್ಳುತ್ತಿದ್ದರೆ…



ಬಯಲು-ಬೆಟ್ಟಗಳಲ್ಲಿ, ನದೀ-ಸರೋವರಗಳಲ್ಲಿ, ಕಾನನೋದ್ಯಾನಗಳಲ್ಲಿ ಪ್ರಕೃತಿಯ ರಮ್ಯತೆಯು ಹೊರಸೂಸುತ್ತಿತ್ತು..



ಅರಿವು ಆನಂದಗಳ ರೂಪದಲ್ಲಿ ಸ್ವಯಂ ನಾರಾಯಣನೇ ಅಲ್ಲಿ ನೆಲೆಸಿದ್ದರೆ..



ಧನಧಾನ್ಯ ಸಮೃದ್ಧಿಯ ರೂಪದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯೇ ನೆಲೆಸಿದ್ದಳಲ್ಲಿ..!



ಆ ಕೋಸಲದಲ್ಲಿ..



ಸಚೇತನರಲ್ಲಿ ಸತತವಾಗಿ ಪ್ರವಹಿಸುವ ಚೈತನ್ಯವಾಹಿನಿಯಂತೆ..



ನಾಡಿನ ಸಮೃದ್ಧಿಗೆ ಪ್ರಥಮ ಕಾರಣವಾಗಿ, ಪ್ರವಹಿಸುತ್ತಿದ್ದಳು ಸರಯೂ..



ಸೃಷ್ಟಿಕರ್ತನ ಮಾನಸವು ಕರಗಿದಾಗ..



ಅದು ಕೈಲಾಸದ ಪರಿಸರದಲ್ಲಿ ಮಾನಸ ಸರೋವರವಾಗಿ ರೂಪುಗೊಂಡಾಗ..



ಅಲ್ಲಿಂದ ಹರಿದವಳವಳು..!



ಬ್ರಹ್ಮಮಾನಸಸರದಿಂದ ಹೊರಹೊಮ್ಮಿದ್ದರಿಂದಲೇ ‘ಸರಯೂ’ ಆಕೆ..



ಅನಂತ ಅಮೃತಬಿಂದುಗಳನ್ನೊಳಗೊಂಡು ಹರಿಯುವ ಆ ನದಿಯ ಪುಣ್ಯತೀರದಲ್ಲಿ



ಅಸಂಖ್ಯ ಅಮೃತಜೀವಿಗಳಿಗೆ ಆಶ್ರಯವಿತ್ತ ಪುರಾತನ ನಗರಿಯೊಂದು ನೆಲೆ ನಿಂತಿದ್ದಿತು..



ಅದುವೇ ಮಾನವ ಕುಲದ ಮೂಲಪುರುಷನಾದ ಮನು ಮಹಾರಾಜನು ನಿರ್ಮಿಸಿದ ಮೋಕ್ಷನಗರಿ ಅಯೋಧ್ಯೆ..!



ಸೃಷ್ಟಿಯ ಮೂಲಪುರುಷನ ಮನಸ್ಸು ನೀರಾಗಿ ಹರಿದ ನದಿಯ ತಟದಲ್ಲಿ…



ಮಾನವಕೋಟಿಯ ಮೂಲಪುರುಷನು ನಿರ್ಮಿಸಿದ ಆ ಮಹಾನಗರಿಯಲ್ಲಿ..



ಮಾನವತೆಯ ಮರ್ಯಾದೆಗಳನ್ನು ಮನುಕುಲಕ್ಕೆ ತೋರಿದ,



ಸೃಷ್ಟಿಯ ಸಂಕಟಕ್ಕೆ ಮಿಡಿಯುವ ಹೃದಯದ ಮಹಾಪುರುಷರು ಆವಿರ್ಭವಿಸಿದರೆ ಅದು ಸಹಜವಲ್ಲವೇ..?



ಶುಭಶಿರದಲ್ಲಿ ಶೋಭಿಸುವ ಮಣಿಮುಕುಟದಂತೆ..



ಮಣಿಮಾಲೆಯ ಮಧ್ಯೆ ಮೆರೆಯುವ ನಾಯಕಮಣಿಯಂತೆ..



ಸಮೃದ್ಧಕೋಸಲದ ಸುಭದ್ರರಾಜಧಾನಿಯಾಗಿ ರಾರಾಜಿಸುತ್ತಿದ್ದಿತು ಅಯೋಧ್ಯೆ..!



ಅಯೋಧ್ಯೆಯೆಂಬ ಸುಮಂಗಲಿಗೆ ತಿಲಕವಾಗಿ ಒಪ್ಪಿತ್ತು ರಾಜರಾಜರು ವಿರಾಜಿಸುವ ರಮಣೀಯವಾದ ಅರಮನೆ ..



ಅಲ್ಲೊಂದು ರತ್ನ ಸಿಂಹಾಸನ..



ಉತ್ತಮಾಂಗವೆನಿಸಿದ ಶಿರಸ್ಸಿನೊಳಗೆ ಮಂಡಿಸಿ ಸಮಸ್ತ ಶರೀರದ ಆಗುಹೋಗುಗಳನ್ನು ನಿಯಂತ್ರಿಸುವ ಮಹಾಮಸ್ತಿಷ್ಕದಂತೆ..



ಅಯೋಧ್ಯೆಯ ಅರಮನೆಯಲ್ಲಿ ಮಂಡಿಸಿ, ಕೋಸಲವೇನು, ಸಮಸ್ತ ಭೂಮಂಡಲದ ಆಗು-ಹೋಗುಗಳನ್ನೇ ನಿಯಂತ್ರಿಸುವ ವಿಶ್ವನಿಯಾಮಕಪೀಠವದು..!



ಭೂಮಂಡಲದ ನಾಯಕರು ಮಂಡಿಸುವ ಮಹಾಸಿಂಹಾಸನವದು..!



ಬ್ರಹ್ಮಾಂಡನಾಯಕನೂ ಮಂಡಿಸಲು ಯೋಗ್ಯವಾದ ಧರ್ಮಸಿಂಹಾಸನವದು..!



ಭೂಲೋಕದ ಸಕಲಜೀವಗಳ ಯೋಗಕ್ಷೇಮದ ಹೊಣೆ ಹೊತ್ತ ಅಖಂಡ ಭೂಮಂಡಲದ ಏಕೈಕ ಸಿಂಹಾಸನವದು..!



ಧರಣಿಯ ರಾಜರೆಲ್ಲರೂ ವಿನಯದಿಂದ ಬಾಗುವ, ಕೋಸಲದ ಪ್ರಜೆಗಳೆಲ್ಲರೂ ಹೆಮ್ಮೆಯಿಂದ ಬೀಗುವ ಮಹೋನ್ನತ ಸಿಂಹಾಸನವದು..



ದುಷ್ಟರನ್ನು ಶಿಕ್ಷೆಯಿತ್ತು ತಿದ್ದುವ, ಶಿಷ್ಟರನ್ನು ರಕ್ಷೆಯಿತ್ತು ಸಲಹುವ ನಿಗ್ರಹಾನುಗ್ರಹ ಸಾಮರ್ಥ್ಯ ಸಂಪನ್ನವಾದ ಪರಮಾಸನವದು..



ಮಾನವತೆಯ ಉಗಮವಾಗುವಾಗಲೇ ಉದಯಿಸಿ ಬಂದ ಆದಿ ಸಿಂಹಾಸನವದು..



ಅನಂತ ಕಾಲಪ್ರವಾಹದ ನಡುವೆಯೂ ತನ್ನ ಸತ್ತ್ವ- ಅಸ್ತಿತ್ವವನ್ನು ಕಳೆದುಕೊಳ್ಳದ ಅಮರ ಸಿಂಹಾಸನವದು..



ರಾಮಾಯಣವು ನಡೆದಿದ್ದು ಆ ಸಿಂಹಾಸನವನ್ನಲಂಕರಿಸಿದ್ದ ಮಹೋನ್ನತವಾದ ರಾಜವಂಶದಲ್ಲಿ..



ಆದಿರಾಜನು ಕಟ್ಟಿದ ಆದಿನಗರಿಯ ಆದಿಸಿಂಹಾಸನದಲ್ಲಿ ಕುಳಿತು ಲೋಕವನ್ನಾಳಿದ ಅನಂತ ಸಾಮರ್ಥ್ಯ -ಸುಗುಣಸಂಪನ್ನರಾದ ಸಮ್ರಾಟರ ವಂಶದಲ್ಲಿ ನಡೆದೊಂದು ಮಹತ್ತರ ಘಟನೆಯೇ ಆದಿಕಾವ್ಯದ ವಸ್ತುವಾಯಿತೆಂಬುದು ಉಚಿತವೇ ಅಲ್ಲವೇ..?





ಹರೇರಾಮ

ಇರುಳ ಮರ ಕರಗಿತು

ಇರುಳ ಚಿಪ್ಪಿನೊಳಗಡೆ


ಕನಸಿನ ಮುತ್ತು

ಮಲಗಿಹರು ಗೋಪಿಯರು

ಕನಸ ಹೊದ್ದು.







ಮರದಡಿಯಲಿ

ಕನಸಿನ ದಿಗಂತ

ಕಣ್ಣ ಹಣತೆಯ ಹಚ್ಚಿ ಕಾದಿಹರು

ಕಂಡಿಹುದು ವ್ರಂದಾವನಕೆ ಬಂದಂತೆ

ಮೋಹನ



ಗೋಪಿಯರ ಮನದಲಿ

ಸಖನೇ ಕಾಮನಬಿಲ್ಲು

ಮತ್ತೆ ಟಿಸಿಲೊಡೆದಿವೆ ಆಸೆಗಳು

ಹಸಿರಾಗುವಂತೆ ಭೂಮಿ

ಮಳೆಗೆ



ನುಡಿಸಿಹನು ಮೋಹನ

ಮತ್ತೆ ಕೊಳಲನು

ಪ್ರತಿ ಗೋಪಿಗೂ ಹಿಗ್ಗು

ಮೋಹನ ತನ್ನ ಮರೆತಿಲ್ಲವೆಂದು



ಕರಗಿತು ಇರುಳ ಮರ

ಮೈಮೇಲೆ ನಿರಾಸೆಯ ಕನಸಿನ ಗೀರು.

ಕುಶಲವರೋ ? ಕುಶಲ ಕುಶೀಲವರೋ ?

ಹರೇರಾಮ





ದ್ವಾರವನ್ನು ದಾಟದೆ ದೇವರನ್ನು ತಲುಪಲುಂಟೇ..?!

ಸಂತರನ್ನು ಬಿಟ್ಟವರಿಗೆ ಭಗವಂತ ಸಿಗುವುದುಂಟೇ..?!



ತನ್ನನ್ನು ತಲುಪಲಾರದೇ ಬಳಲುವ ಜೀವಗಳನ್ನು ಕಂಡು ಕನಿಕರಿಸಿದ ಕರುಣಾಸಿಂಧುವು,

ಸರ್ವಕಾಲಗಳಲ್ಲಿಯೂ ಸರ್ವದೇಶಗಳಲ್ಲಿಯೂ ಸಂತರ ರೂಪದಲ್ಲಿ ತನ್ನ ದ್ವಾರಗಳನ್ನು ತೆರೆದಿಟ್ಟನಲ್ಲವೇ…!



ಮೊದಲು ಸಂತ..

ಮತ್ತೆ ಭಗವಂತ..!



ಆದುದರಿಂದಲೇ ಇರಬೇಕು..

ರಾಮಾಯಣದ ಪ್ರಸ್ತುತಿಯು ರಾಮನ ಮುಂದಾಗುವುದಕ್ಕೆ ಮುನ್ನ ಋಷಿಸಮೂಹದ ಸಮ್ಮುಖದಲ್ಲಿ ಆಯಿತು...









ಆಶ್ರಮದ ದಿವ್ಯಪರಿಸರವದು…

ಸೂರ್ಯನ ಸಾವಿರಾರು ಕಿರಣಗಳು ಜೊತೆಗೂಡಿ ಇಳಿದು ಬಂದು ಧರೆಯನ್ನು ಬೆಳಕಾಗಿಸುವಂತೆ

ಪರಮಾತ್ಮಸೂರ್ಯನ ಕಿರಣಗಳೇ ಆದ ತಾಪಸರ ಗಡಣವೊಂದು ಅಲ್ಲಿ ಸಮಾವೇಶಗೊಂಡಿತ್ತು..

ಸಾಧನೆ - ಸುಜ್ಞಾನಗಳ ಪ್ರಭೆಯನ್ನಲ್ಲಿ ಪಸರಿಸಿತ್ತು..



ಷಡ್ರಸೋಪೇತವಾದ ಮೃಷ್ಟಾನ್ನ ಭೋಜನದ ಸಂತೃಪ್ತಿಯಲ್ಲಿ ಗೃಹಸ್ಥರು ತಾಂಬೂಲವನ್ನು ಮೆಲ್ಲುತ್ತಾ ಜಗುಲಿಯಲ್ಲಿ ಕುಳಿತುಕೊಳ್ಳುವಂತೆ..

ದಿನದ ಸಾಧನೆಯ ಅಮೃತರಸೋಪೇತವಾದ ದರ್ಶನ-ಅನುಭೂತಿಗಳಿಂದ ತೃಪ್ತಾತ್ಮರಾಗಿ

ಅಂತರಂಗದಲ್ಲಿ ಅಂತಃಸುಖವನ್ನೇ ಮೆಲುಕು ಹಾಕುತ್ತಾ, ಅಂತಃಪ್ರಪಂಚದ ಮಾತುಕತೆಗಳನ್ನೇ ನಡೆಸುತ್ತಾ..

ಆಶ್ರಮದ ಅಂಗಳದಲ್ಲಿ ಸಂತರನೇಕರು ಸುಖೋಪವಿಷ್ಟರಾಗಿರುವಾಗ..



ಸುಮಗಳ ಸುಗಂಧವನ್ನು ಹೊತ್ತು ತರುವ ತಂಗಾಳಿಯಂತೆ,

ಹುಣ್ಣಿಮೆಯ ರಾತ್ರಿ ಹಿಮಶಿಖರಗಳಲ್ಲಿ ಹಿಮಕಿರಣನು ಸುರಿಸುವ ಅಮೃತವೃಷ್ಟಿಯಂತೆ,

ಅಲ್ಲಿ ಕೇಳಿ ಬಂದಿತೊಂದು ಸರ್ವಶ್ರುತಿಮನೋಹರವಾದ ದಿವ್ಯಗಾನ..



ಸುಕುಮಾರರ ಸುಮನಗಳಿಂದ, ಸುಮಧುರಕಂಠಗಳಿಂದ ಹೊರಹೊಮ್ಮಿದ ಅತಿಶಯಮನೋಜ್ಞವಾದ

ಆ ನಿನಾದವು ಋಷಿಸ್ತೋಮದ ಕಿವಿಗಳನ್ನು ಹೊಕ್ಕು ಕಣ್ಣುಗಳನ್ನೇ ಸೆಳೆದೊಯ್ದಿತೆನ್ನಬೇಕು.

ಸರ್ವರ ದೃಷ್ಟಿಗಳು ಅಪ್ರಯತ್ನವಾಗಿ ಧ್ವನಿಮೂಲದೆಡೆಗೆ ಹರಿದವು….



ಆಹಾ..! ಎಂಥ ದೃಶ್ಯವದು..!



ಒಂದು ಎರಡಾಗಿ, ಎರಡು ಒಂದಾದಂತೆನಿಸುವ ಸುಂದರ ಸನ್ನಿವೇಶ..

ಎರಡು ರೂಪ ತಾಳಿದ ತತ್ತ್ವವೊಂದು ತನ್ನದೇ ಗಾನದಲ್ಲಿ ಸ್ವರ-ಭಾವಗಳನ್ನು ಬೆರೆಸಿ ಒಂದಾದಂತೆ…



ಸ್ವರದಲ್ಲಿ, ಆಕೃತಿಯಲ್ಲಿ, ಹಾವಭಾವಗಳಲ್ಲಿ ಸರ್ವವಿಧದಲ್ಲಿಯೂ ಒಬ್ಬರನ್ನೊಬ್ಬರು ಹೋಲುವ

ಕುಮಾರರಿಬ್ಬರ ಕೊರಳುಗಳು ಮಿಡಿಯುತ್ತಿವೆ…

ತಂಗಾಳಿಯಲ್ಲಿ ತೇಲಿ ಬರುವ ಸುಗಂಧದಂತೆ ಕುಮಾರರ ದಿವ್ಯಧ್ವನಿಗಳಲ್ಲಿ ರಾಮನ ಕಥೆ ಹರಿದು ಬರುತ್ತಿದೆ..



ಎಲ್ಲರ ಮುಖಗಳೂ ಕುಮಾರರಿಗೆ ಅಭಿಮುಖವಾದವು…

ಎಲ್ಲರ ಕಿವಿಗಳೂ ಗಾನಸುಮುಖವಾದವು…

ಎಲ್ಲರ ಮನಗಳೂ ರಾಮಕಥೆಯಲ್ಲಿ ಕರಗಿದವು…

ರಾಮಗಾನವನ್ನುಳಿದು ದಿವ್ಯನಿಶ್ಯಬ್ದವೇ ಆವರಿಸಿತಲ್ಲಿ..

ಮುನಿಗಳೇನು, ಮೃಗ-ಪಕ್ಷಿಗಳು, ತರು-ಲತೆಗಳೂ ತನ್ಮಯಗೊಂಡವು ಕಥಾಗಾನದಲ್ಲಿ…!

ಭೂಚಕ್ರವು‍ ಕಥೆಯ ಸುತ್ತಲೇ ಸುತ್ತತೊಡಗಿತು…

ಗಾಳಿ ತಲೆದೂಗಿತು…

ಗಗನ ತಲೆಬಾಗಿತು…

ರಾಮತತ್ತ್ವವನ್ನುಳಿದು ಜಗವೆಲ್ಲವೂ ಮರೆಯಾಯಿತು…

ಅಲೆಯಲೆಯಾಗಿ ರಾಮಾಯಣವು ಪಸರಿಸತೊಡಗಿತಲ್ಲಿ…



ಗಂಗೆಯು ಒಮ್ಮೊಮ್ಮೆ ಹರಿಯುವಳು,

ಒಮ್ಮೊಮ್ಮೆ ನಡೆಯುವಳು,

ಒಮ್ಮೊಮ್ಮೆ ನಿಂತೇ ಬಿಡುವಳು,

ಭೋರ್ಗರೆದು ಬಂಡೆಗಳಿಗೆ ಬಡಿಯುವಳೊಮ್ಮೆ,

ಸುಳಿದು ಸುತ್ತುವಳೊಮ್ಮೆ,

ನರ್ತಿಸುವಳಿನ್ನೊಮ್ಮೆ..



ಕುಮಾರರ ಕಂಠಗಳಿಂದ ಹರಿಯುತ್ತಿದ್ದ ರಾಮಾಯಣಗಂಗೆಯೂ ಅಂತೆಯೇ..

ಮುದಗೊಳಿಸುವ ಶೃಂಗಾರದ ಸೊಗವೊಮ್ಮೆ…

ಎದೆಸೆಟೆಸುವ ವೀರದ ಧೀರತೆಯಿನ್ನೊಮ್ಮೆ…

ಕರುಳು ಕರಗಿಸುವ ಕರುಣೆಯ ಕಣ್ಣೀರೊಮ್ಮೆ…

ನಕ್ಕು ನಗಿಸುವ ಹಾಸ್ಯ-ಲಾಸ್ಯವಿನ್ನೊಮ್ಮೆ…

ಒಮ್ಮೆ ಕಣ್ಣರಳಿಸುವ ಅದ್ಭುತದ ಬೆರಗು..

ಇನ್ನೊಮ್ಮೆ ಬೆಚ್ಚಿ ಬೀಳಿಸುವ ಭಯಾನಕದ ಬರ್ಬರತೆ..

ಇಲ್ಲಿ ರೋಮಗಳನ್ನು ನಿಮಿರಿಸುವ ರೌದ್ರದ ಕ್ರೋಧಾವೇಶ…

ಅಲ್ಲಿ ಮುಖ ಕಿವಿಚಿಸುವ ಬೀಭತ್ಸದ ಜುಗುಪ್ಸೆ..

ಆಳದಲ್ಲೆಲ್ಲೆಲ್ಲೂ ಮಾನಸವನ್ನು ಮಾನಸಸರೋವರವಾಗಿಸುವ ಶಾಂತದ ಪರಮಶಾಂತಿ…!

ಹೀಗೆ ರಸವಿಶ್ವರೂಪದರ್ಶನವಾಯಿತಲ್ಲಿ..!



ವೈಕುಂಠವಿಹಾರಿಯಾದ ಪರಮಪುರುಷನು, ಸಹಸ್ರಾರ, ಆಜ್ಞಾ, ವಿಶುದ್ಧಿ, ಅನಾಹತ, ಮಣಿಪೂರ, ಸ್ವಾಧಿಷ್ಠಾನ, ಮೂಲಾಧಾರಗಳೆಂಬ ಏಳು ಹೆಜ್ಜೆಗಳನ್ನಿರಿಸಿ ಶ್ರೀರಾಮನಾಗಿ ಭುವಿಗೆ ಅವರೋಹಣ ಮಾಡಿ, ಅವತಾರ ಕಾರ್ಯವನ್ನು ನಡೆಸಿ, ಪುನಃ ಅವೇ ಏಳು ಹೆಜ್ಜೆಗಳಲ್ಲಿ ದಿವಿಗೆ ಆರೋಹಣ ಮಾಡಿದಂತೆ,

ಷಡ್ಜ - ಋಷಭ - ಗಾಂಧಾರ - ಮಧ್ಯಮ - ಪಂಚಮ - ಧೈವತ - ನಿಷಾದಗಳೆಂಬ ಸಪ್ತಸ್ವರಗಳಲ್ಲಿ

ಆರೋಹಣ, ಅವರೋಹಣದ ಲೀಲೆಯೊಡನೆ ಗಾನವಿಮಾನದಲ್ಲಿ ಭೂಲೋಕ - ಭಾಲೋಕಗಳ ವಿಹಾರ ನಡೆಸಿದರು ಕುಶಲವರು..!



ಸಹಜ ಓದಿಗೇ ಮಧುರವಾದ ರಾಮಾಯಣವು ಕುಶಲವರಿಂದ ಹಾಡಲ್ಪಟ್ಟಾಗ, ಮನೋಜ್ಞವಾದ ಶೃಂಗಾರದಿಂದಾಗಿ ಅಧಿಕವಾಗಿ ಶೋಭಿಸುವ ಸಹಜಸೌಂದರ್ಯದಂತೆ ಅತಿಶಯವಾಗಿ ಶೋಭಿಸಿತ್ತು…



ಸಂಗೀತ-ಸಾಹಿತ್ಯಗಳ ಮಧ್ಯೆ ಮಾಧುರ್ಯದ ಸ್ಪರ್ಧೆ ಏರ್ಪಟ್ಟಿತ್ತಲ್ಲಿ..!

ಕವಿಹೃದಯವೋ, ಕುಮಾರರ ಕಂಠವೋ..

ಗೀತವೋ, ಶ್ಲೋಕವೋ..

ಯಾವುದು ಹೆಚ್ಚು ಮಧುರವೆಂದು ತಿಳಿಯದಾದರು ಮಹರ್ಷಿಗಳು..

ಕುಶಲವರೆಂಬ ಕುಶಲಸಾರಥಿಗಳು ರಾಮಾಯಣಸರಸ್ವತಿಯನ್ನು ಗಾನರಥದಲ್ಲಿ ಕುಳ್ಳಿರಿಸಿ ಋಷಿಹೃದಯಗಳಿಗೆ ಕರೆದೊಯ್ದರು….



ವರ್ತಮಾನವು ಭೂತವಾಗುವುದು ಲೋಕಸಹಜವಾದರೆ

ಕುಶಲವರು ರಾಮಯಣವನ್ನು ಹಾಡುವಾಗ ಭೂತವೇ ವರ್ತಮಾನವಾಯಿತು…

ಎಂದೋ ನಡೆದು ಹೋದ ರಾಮಾಯಣದ ಘಟನೆಗಳು ಇಂದು ನಡೆಯುವಂತೆ, ಈಗ ಕಣ್ಮುಂದೆ ನಡೆಯುತ್ತಲೇ…ಇರುವಂತೆ ಋಷಿಗಳಿಗೆ ಗೋಚರಿಸತೊಡಗಿದವು..



ಗಾನವು ಕಾಲದ ದ್ವಾರವನ್ನು ತೆರೆದಾಗ..

ವಾಲ್ಮೀಕಿಗಳ ಅಮೃತಾಕ್ಷರಗಳು ಅರಿವಿನ ಕಿರಣಗಳನ್ನು ಬೀರಿದಾಗ..

ಅಮರನಾಯಕನ ಇತಿಹಾಸದರ್ಶನವಾಯಿತು ಸುಕೃತಿಸಂತರಿಗೆ….



ಸಾರಸ್ವತಸಾಮ್ರಾಜ್ಯದ ಸ್ವರಸಿಂಹಾಸನದಲ್ಲಿ ರಾಮಾಯಣವೆಂಬ ರಸರಾಜನನ್ನು ”ದೇವರ ಮಕ್ಕಳು” ಕುಳ್ಳಿರಿಸಿದಾಗ

“ದೈವೀಪ್ರಜೆ”ಗಳು ಆನಂದಬಾಷ್ಪಗಳಿಂದ ಅಭಿಷೇಕಗೈದರು…



ಭಾವದೊಳಮನೆಯನ್ನು ಹೊಕ್ಕು ಕುಶಲವರು ರಾಗವಾಗಿ ಹೊರಹೊಮ್ಮಿ ಋಷಿಗಳ ಕಿವಿದೆರೆಗಳನ್ನು ಪ್ರವೇಶಿಸಿದರೆ,

ಆಲಿಸುತ್ತಾ.. ಆಸ್ವಾದಿಸುತ್ತಾ.. ಋಷಿಗಳು ಮೂಕತನ್ಮಯಭಾವವನ್ನು ತಾಳಿದರು.



ಸಮಯ ಸರಿದಂತೆ ಮುನಿಗಳ ಮೌನವು, ಧರೆಯಿಂದ ಹೊರಚಿಮ್ಮುವ ಚಿಲುಮೆಯಂತೆ ಪ್ರಶಂಸೆಯ ಸಹಜೋದ್ಗಾರವಾಗಿ ಹೊರಹೊಮ್ಮಿತು.

ತಪಃಶ್ಲಾಘ್ಯರಾದ ಮಹರ್ಷಿಗಳ ಶ್ಲಾಘನೆಯಿಂದ ಅನುಗೃಹೀತರಾದ ಕುಶಲವರು ಮತ್ತಷ್ಟು ಮಧುರವಾಗಿ ಹಾಡತೊಡಗಿದರು….



ಸುಖಾನುಭವವು ನೈಜವಾದುದೇ ಆದರೆ ಅದು ಪರ್ಯವಸಾನವಾಗುವುದು ತ್ಯಾಗದಲ್ಲಿ..

ರಾಮಕಥಾ ಗಾನಸುಖವನ್ನು ಆಸ್ವಾದಿಸಿ…ಆಸ್ವಾದಿಸಿ…. ಮೈಮರೆತ ಋಷಿಗಳ ಸ್ಥಿತಿಯೂ ಹಾಗೆಯೇ ಆಯಿತು…!



ಭಾವಾವಿಷ್ಟರಾದ ಋಷಿಗಳು ಕಥಾಂತ್ಯದಲ್ಲಿ ಹಿಂದುಮುಂದಿನದನ್ನು ಮರೆತು

ತಮ್ಮಲ್ಲಿರುವ ವಸ್ತುಗಳನ್ನು ಕುಶಲವರಿಗೆ ಕೈಯೆತ್ತಿ ಕೊಡತೊಡಗಿದರು….

ಪ್ರೀತಿವಶನಾದ ಮುನಿಯೊಬ್ಬ ಸಭಾಮಧ್ಯದಲ್ಲಿ ಮೇಲೆದ್ದು ಕುಶಲವರಿಗೆ ಕಲಶವನ್ನಿತ್ತರೆ….

ಸುಪ್ರಸನ್ನನಾದ ಮತ್ತೊಬ್ಬ ಮುನಿ ಅವರೀರ್ವರಿಗೆ ನಾರುಬಟ್ಟೆಯನ್ನಿತ್ತನು…

ಮಗದೊಬ್ಬ ಕೃಷ್ಣಾಜಿನವಿತ್ತರೆ….

ಇನ್ನೊಬ್ಬ ಕಮಂಡಲುವನ್ನು…

ಮೌಂಜಿ…

ಯಜ್ಞಸೂತ್ರ…

ಯಜ್ಞಪಾತ್ರೆ…

ಆಸನ…

ಜಪಮಾಲೆ…

ಕಾಷಾಯವಸ್ತ್ರ…

ಜಟೆಯನ್ನು ಕಟ್ಟುವ ದಾರ…

ಸಮಿತ್ತುಗಳನ್ನು ಮಾಡಲು ಬಳಸುವ ಕೈಗೊಡಲಿ…

ಸೌದೆಹೊರೆ…!

ಕಟ್ಟಿಗೆಯನ್ನು ಕಟ್ಟುವ ಹಗ್ಗ…!

ಮತ್ತೊಬ್ಬನಂತೂ ಕೊಡಲು ಬೇರೇನೂ ಕಾಣದೆ ಉಡುಗೊರೆಯಾಗಿ ಕೌಪೀನವನ್ನೇ ಕೊಟ್ಟು ಬಿಟ್ಟ..!

ಹೃದಯದ ತುಂಬಾ..ಪ್ರೀತಿಯನ್ನು ತುಂಬಿಕೊಂಡ ಕೆಲವು ಋಷಿಗಳು ಕುಮಾರರಿಗೆ ದೀರ್ಘಾಯುಸ್ಸನ್ನು ಪ್ರದಾನ ಮಾಡಿದರೆ ಮತ್ತೆ ಕೆಲವರು ದುರ್ಲಭವಾದ ವರಗಳನ್ನು ಪ್ರದಾನಮಾಡಿದರು.



ಕಿರಿಯರು ಕೊಡಮಾಡಿದ ಹಿರಿದಾದ ಆನಂದಕ್ಕೆ ಪ್ರತಿಯಾಗಿ ಏನು ಕೊಟ್ಟರೆ ತಾನೇ ಅದು ಸರಿಯಾದೀತು..?ಆಯುಷ್ಯವಾಗಲಿ, ಆರೋಗ್ಯವಾಗಲಿ, ಐಶ್ವರ್ಯವಾಗಲಿ ಆ ಆನಂದಕ್ಕೆ ಸಾಟಿಯಲ್ಲ….

ಹಾಗಿರುವಾಗ ಕೌಪೀನವನ್ನೋ, ಕಟ್ಟಿಗೆಯನ್ನೋ ಉಡುಗೊರೆಯಾಗಿ ಕೊಡುವುದೇ…?

ಉತ್ತಮೋತ್ತಮ ಸಾಹಿತ್ಯ - ಸಂಗೀತಗಳ ಬೆಲೆ ಕೌಪೀನ ಮತ್ತು ಕಟ್ಟಿಗೆಯೇ…?



ಪೂಜ್ಯ ರಾಮಭದ್ರಾಚಾರ್ಯರು ಆಗಾಗ ಹೇಳುತ್ತಿದ್ದ ಕಥೆಯೊಂದು ನೆನಪಾಗುತ್ತದೆ….



ನಟನೊಬ್ಬ ರಾಜಾಸ್ಥಾನದಲ್ಲಿ ಗೋವಿನ ವೇಷವನ್ನು ಅಭಿನಯಿಸಿದ…

ದೊರೆಗೆ ಅದೆಷ್ಟು ಮೆಚ್ಚುಗೆಯಾಯಿತೆಂದರೆ ತನ್ನ ಉತ್ತರೀಯವಾದ ಪೀತಾಂಬರವನ್ನೇ ಹೊದಿಸಿ ನಟನನ್ನು ಸಮ್ಮಾನಿಸಿದ…

ಉತ್ತೇಜಿತನಾದ ನಟ ಮತ್ತಷ್ಟು ಸೊಗಸಾಗಿ ಗೋವಿನ ಅಭಿನಯವನ್ನು ಮಾಡತೊಡಗಿದ…



ಸಭೆಯಲ್ಲಿ ಉಪಸ್ಥಿತನಿದ್ದ ಹಳ್ಳಿಗನೊಬ್ಬ ಪರೀಕ್ಷಿಸಲೋಸುಗವಾಗಿ ಪುಟ್ಟ ಕಲ್ಲೊಂದನ್ನು ಎತ್ತಿ ವೇಷದ ಗೋವಿನ ಬೆನ್ನಿನ ಮೇಲೆಸೆದ…

ಗೋವಿನಲ್ಲಿ ಮಾತ್ರ ಇರುವ, ಬೇರೆ ಪ್ರಾಣಿಗಳಲ್ಲಿ ಇಲ್ಲದಿರುವ ಒಂದು ವಿಶಿಷ್ಟ ಶಕ್ತಿಯೆಂದರೆ ಅದು ಮೈಮೇಲೆ ಕುಳಿತ ನೊಣವನ್ನೋ, ಇತರ ಕೀಟಗಳನ್ನೋ ಓಡಿಸಲು ಚರ್ಮದ ಅಷ್ಟೇ ಭಾಗವನ್ನು ಮಾತ್ರವೇ ಅಲ್ಲಾಡಿಸಬಲ್ಲುದು…



ನಟನಲ್ಲಿ ಅದೆಷ್ಟು ನೈಪುಣ್ಯವಿತ್ತೆಂದರೆ ಶರೀರದಲ್ಲಿ ಹಳ್ಳಿಗನು ಕಲ್ಲೆಸೆದ ಪ್ರದೇಶವನ್ನು ಮಾತ್ರವೇ ನಡುಗಿಸಿದನಾತ…

ನಟನ ಅದ್ಭುತ ಕೌಶಲವನ್ನು ನೋಡಿ ಮೆಚ್ಚಿದ ಹಳ್ಳಿಗ ತಾನು ಹೊದ್ದ ಕಂಬಳಿಯನ್ನೇ ಆತನಿಗಿತ್ತು ಕೈಮುಗಿದ…



ಆಗ ನಡೆಯಿತೊಂದು ವಿಚಿತ್ರ ಘಟನೆ…



ರಾಜನು ಪ್ರದಾನ ಮಾಡಿದ ಪೀತಾಂಬರವನ್ನು ತೆಗೆದಿರಿಸಿದ ನಟ ಹಳ್ಳಿಗನ ಹರಕು ಕಂಬಳಿಯನ್ನು ಅಭಿಮಾನದಿಂದ ಹೊದ್ದುಕೊಂಡ…

ಆಶ್ಚರ್ಯ – ಆಘಾತಗಳಿಗೊಳಗಾದ ರಾಜ, ಆ ವರ್ತನೆಯ ಔಚಿತ್ಯವನ್ನು ಪ್ರಶ್ನಿಸಿದಾಗ ನಟ ನೀಡಿದ ಉತ್ತರ ಬಹುಮಾನಕ್ಕೆ ಹೊಸ ವ್ಯಾಖ್ಯೆಯನ್ನೇ ಕೊಟ್ಟಿತು…



“ದೊರೆಯೇ, ಹಳ್ಳಿಗನಿಗಿಂತ ಬಹುದೊಡ್ಡವನು ನೀನು…

ಕಂಬಳಿಗಿಂತಲೂ ಬಹು ಮೂಲ್ಯವಾದುದು ನೀನಿತ್ತ ಪೀತಾಂಬರ…

‘ಮಾನ’ ಶಬ್ದಕ್ಕೆ ‘ಅಳತೆ’ ಎಂಬ ಅರ್ಥವಿದೆ…

ಅಳೆದು ನೋಡಿದಾಗ ‘ಬಹು’ವೆನಿಸಿದ ಸಂಗತಿಯನ್ನು ಮೆಚ್ಚಿ ನೀಡುವ ಕೊಡುಗೆಗೇ ಬಹುಮಾನವೆನ್ನುವರು..

ನೀನು ಮೇಲ್ನೋಟಕ್ಕೆ ಮೆಚ್ಚಿ ಉಡುಗೊರೆಯನ್ನಿತ್ತೆ…

ಆದರೆ ನನ್ನ ವಿದ್ಯೆಯನ್ನು ಚೆನ್ನಾಗಿ ಅಳೆದು ಯಥಾರ್ಥವಾದ ಬಹುಮಾನವಿತ್ತವನು ಹಳ್ಳಿಗ..

ಅಳೆದು ಅರಿತು ಕೊಟ್ಟ ಉಡುಗೊರೆಗೆ ನಿಜವಾದ ಬೆಲೆ…

ವಸ್ತುವಿನ ಬೆಲೆ ಬೆಲೆಯಲ್ಲ…

ಬಹುಮಾನದ ಹಿಂದಿನ ಭಾವ ಎಷ್ಟು ದೊಡ್ದದೋ ಬಹುಮಾನ ಅಷ್ಟೇ ದೊಡ್ಡದು…”



ಈ ಕಥೆಯ ಬೆಳಕಲ್ಲಿ ಕಣ್ಣಿಟ್ಟು ನೋಡಿದರೆ ಋಷಿಗಳಿತ್ತ ಕೌಪೀನ – ಕಾಷ್ಟಗಳಲ್ಲಿ ಕನಕರತ್ನಗಳನ್ನು ಮೀರಿದ ಮೌಲ್ಯವು ಕಂಡುಬರುವುದಲ್ಲವೇ…!?



ಹೀಗೆ ಆದಿಕವಿಯೆದೆಯಲ್ಲಿ ಆವಿರ್ಭವಿಸಿ, ಕುಶಲವರೆಂಬ ಕುಶಲ ಕುಶೀಲವರಲ್ಲಿ ಅಭಿವ್ಯಕ್ತವಾಗಿ, ಸಂತರ ಸಭೆಯಲ್ಲಿ ಸಮ್ಮಾನಗೊಂಡು, ಕಥಾನಾಯಕನಾದ ವಿಶ್ವನಾಯಕನ ಸಾನ್ನಿಧ್ಯ ಸೇರಲು ತವಕಿಸಿತು ಅಮರಕಥಾನಕ…





ಹರೇರಾಮ